Monday, June 14, 2010

ನರಸಿಂಹ ಚರಿತ್ರೆ - ೨

ಕೆಸರೊಳಗಿನ ಮಾಣಿಕ್ಯದಂದದಿ
ಅಸುರಗೇ ಪ್ರಹ್ಲಾದನುದಿಸಿದನು
ಮಿಸುನಿಯಂತೆ ಶಿಶು ಹೊಳೆಯುತ್ತಿರಲು
ಕುಶಲದ ರಕ್ಕಸ ರಾಯ್ಮುದ್ದಿಸಿದ

ಹರಿಡಿಂಗರಿಗನ ದೇಹದ ಕಾಂತಿ
ಹರಿದುವು ದಶದಿಕ್ಕುಗಳಿಗು ಶಾಂತಿ
ದುರುಳ ಹಿರಣ್ಯಕನವ ದುರ್ಮಂತ್ರಿ
ಬರಹವ ಕಲಿಸಬೆಕೆಂದನು ತಂತ್ರಿ
ಕರೆಸಿದ ಕರಣಿಕರನು ದಿಗ್ದಂತಿ
ಬರಸೆಂದನು ಬಾಲನ ಕಡುಭ್ರಾಂತಿ

ಓದೊಮಠಕೆ ನಡೆಯಲು ಪ್ರಹ್ಲಾದ
ಓದೋ ಮಂಟಪದೊಳಗೆ ಬಾಲಕನ
ಕಾದಿಹ ದೈತ್ಯರ ಕೂಡೆ ಮತ್ತವನ
ಮಾಧವನಂಘ್ರಿಯ ಪ್ರೀಯದ ಮಗನ
ಆದಿನರಾಯಣಗೊಲಿದಿದ್ದವನ

ಪರಮಭಕ್ತರಿಗೆ ಪರಿಶೋಭಿಪನ
ಹರಿಪಾದವೆ ಗತಿಯೆಂಬಸೇವಕನ

ಓನಾಮವ ಬರೆಯೆಂದರೆ ಅವನು
ಶ್ರೀನಾರಾಯಣನೆಂದು ಬರೆದನು
ನಾನಾವಿಧದಲಿ ಕಲಿಸಿದರವನಿಗೆ
ಜಾಣಶ್ರಿರಂಗನ ಧ್ಯಾನವ ಬಿಡನು

ಬಿಡೋಯೆನ್ನ ಹಗೆಯನು ನೆನೆಯುವುದ
ಖಡುಗವ ಪಿಡಿದು ತಾ ಕಲಿಯಾದ
ಹಿಡಿದ್ ಗಾಂಡೀವ್ದಲಿ ತರಿದೊಟ್ಟಿಸಿದ
ನಡೆದನು ಪ್ರಹ್ಲಾದನ ಬಳಿಗಾಗ

ಸರಿಯೆ ಎನ್ನ ಸಹಸಕೆ ಮತ್ತವನು

ದೇಶವ ತಿರುಗುವ ದಾಸ ಮತ್ತವನು
ಲೇಸು ಕೊಡುವನೇ ನಿನಗೆ ಮತ್ತವನು

ಅಂದೇ ಪಾತಾಳಕೆ ಬಿದ್ದೋನು
ಬಂದು ಜೀವಿಪೊನಾಗೆನ ಮುಂದವನು

ಕೇಳ್ ರಕ್ಕಸ ನಿನ್ನ ಮಗ ನಾನಲ್ಲ

ಆಡಿಕೊಂಬ ಬರೆ ಶಿಶು ನಾನಲ್ಲ

ತನುವನು ದನುಜಾರಿಗೆ ಮಾರಿದೆನು
ವನಜ್ನಾಭನ ಪಾದವ ನಂಬಿಹೆನು

ಎನ್ನ ಹೃದಯದಲೀ ರಂಗ ಬಂದಿರುವನು
ನಿನ್ನ ನನ್ನ ನುಡಿಗಳ ಕೇಳುತ್ತಿರುವನು

ನಿಲ್ಲು ನಿಲ್ಲು ನೀ ಬದುಕುವನಲ್ಲ
ಬಲ್ಲವನಾದರೆ ಹೊಯ್ಯೆಲೊ ಖುಲ್ಲ

ಎಂದ ಮಾತಿಗೆ ಹಿರಣ್ಯಕನು ಗರ್ಜಿಸಿದ
ಕೊಂದಲ್ಲದೆ ಮಾಣೆನು ಮಗನೆಂದ
ಕಂದನ್ ತೆಗೆದು ಗಗನಕ್ಕಿಟ್ಟ
ಚಂದ್ರಾಯುಧದಲಿ ಮೈಯ ಕಡಿಸಿದ
ಒಂದು ಕೋಟಿ ಹಾವಲಿ ಕಚ್ಚಿಸಿದ

ಹಾಲೊಳು ವಿಷವ ಬಾಲಕಗೆ ಕುಡಿಸಿದ

ಪಟ್ಟದಾನೆಗಳ ತನ್ರೆಂತೆಂದ
ನೆಟ್ಟಗೆ ಮಾವ್ಟಿಗ ಕರಕೊಂಬರಲು
ಮೆಟ್ಟಿ ಸೀಳಿರೋ ಇವನೆಂದೆನಲು
ಪಟ್ಟದಾನೇಗಳು ನೀಲವರ್ಣನಾ
ಮುಟ್ಟಲಂಜೊಮ್ಮೇ ಓಡುತ್ತಿರಲು

ಅರಿದರಿದೇ ಅಂದೇ ಬೆರಗಾದೆ
ಬರಿಚಿಂತೇಲೇಸೂ ಬೆರಗಾದೆ

ಎಲ್ಲಿಹನೋ ನಿನ್ನೊಡೆಯನೆಂದರೆ
ಇಲ್ಲೇ ತೋರುವೆನೆಂದನು ತರಳ
ಕಲ್ಕಂಬದಲೀ ಬಂದು ಕರೆಯಲು

ಇಬ್ಬಗೆಯಾಗೀ ನೆಲೆಸಿತು ಕಂಬ
ಮಬ್ಬಾಯಿತು ಹೊಗೆಯಲಿ ಪ್ರತಿಬಿಂಬ

ಚಿಟಿಲುಚಿಟಿಲು ಭುಗಿಭುಗಿಲೆಂದೇಳುತ
ಕೇಸರಿ ರೂಪಲಿ ತಾ ಹೊರಘೊರಟ
ಸೂಸುವ ಕಿಡಿಗಂಗಳ ಬಲು ತುಂಟ
ದೇಶದಿ ದಾನವರೆದೆಯಾ ಗೂಟ
ಸಾಸಿರ ನಾಮದ ಶ್ರೀಲಕ್ಷ್ಮಿಯರಸ

ಹೊಡೆದು ಕೆಡಹಿ ತೊಡೆ ಮೇಲ್ಮಲಗಿಸಿದ

ಕಮಾನು ಕರುಳನು ಮಾಲೇಲ್ಪೊತ್ತ

ಶ್ರೀದೇವೀ ಸನ್ಮ್ಯಾಳ್ದಲಿ ಮೆರೆದ

ಬಾಲನ ಮೇಲೇ ಕರುಣವನಿತ್ತ

ಆದಿ ನಾರಾಯಣ ಶ್ರೀನಾರಸಿಂಹ ಪರಮ ಭಾಗವತನಾದ ಪ್ರಹ್ಲಾದನಿಗೆ ಪರಮ ಪದವಿಯನಿತ್ತೇ, ಇತಿಶ್ರೀ.

==================

ಮತ್ತಿದೂ ನಮ್ಮ ತಂದೆಯ ಮನೆಯಲ್ಲಿ ಹೇಳುತ್ತಿದ್ದುದು. ಸಾಕಷ್ಟು ತಲೆಮಾರು ದಾಟಿರಬೇಕು, ನೆನಪು ಬಹಳಷ್ಟು ಕಡೆ ಕೈ ಕೊಟ್ಟಿದೆ, ಹೇಳಿಕೊಟ್ಟವರಿಗೂ. ಇದ್ದುದನ್ನು ಸರಿ ಜೋಡಿಸಿ ಇಲ್ಲಿ ಬರೆದಿದ್ದೇನೆ. ಪೂರ್ಣಪಾಠ ತಿಳಿದವರು ತಿಳಿಸಿದರೆ ಉಪಕಾರ. ಇದು ಕನಕ ದಾಸರದೆಂದು ನಮ್ಮ ಚಿಕ್ಕಪ್ಪನವರ ಅಭಿಪ್ರಾಯ, ನನಗೆ ಖಚಿತವಿಲ್ಲ.

2 comments:

~rAGU said...

ನಿಮ್ಮಿಂದ ಒಂದು ಸಹಾಯ ಬೇಕಿತ್ತು. ನಾಡಿದ್ದು ಇಲ್ಲಿ ಕನ್ನಡ ಸಂಘದಲ್ಲಿ ಹರಿಶ್ಚಂದ್ರ ಕಾವ್ಯ ಓದಬೇಕೆಂದಿದ್ದೇನೆ. ಕೆಳಗಿನ ಸಾಲು ಬಿಡಿಸುವುದುದು ಅರ್ಥ ಹೇಗೆ ಎಂದೇ ತಿಳಿಯುತ್ತಿಲ್ಲ. ನೀವು ತಿಳಿಸಿದರೆ ಉಪಕಾರವಾಗುತ್ತದೆ.

"ಭೂವರನಾಪುರಕ್ಕೊಡೆಯನರಿಶರಧಿವಡಬನಾರಾತಿಗಜಪಂಚಾಸ್ಯನು"

"ಭೂವರನು ಆ ಪುರಕ್ಕೆ ಒಡೆಯನು
ಅರಿ ಶರಧಿ ವಡಬನ್ (ಶತ್ರು ಶರಧಿಗೆ ಬೆಂಕಿ)
...
ಗಜ ಪಂಚಾಸ್ಯನು" (ಗಜಕ್ಕೆ ಸಿಂಹ)"
ಆದರೆ "ನಾರಾತಿ" ಬಿಡಿಸುವುದು ಹೇಗೆ? ದಯವಿಟ್ಟು ತಿಳಿಸುತ್ತೀರಾ?

~rAGU said...

ಒಹ್ಹೋ ಆರಾತಿ ಎಂದರೆ ಶತ್ರು ಎಂದಾಗುವುದಾದರೆ ನನ್ನ ಸಮಸ್ಯೆ ಬಗೆಹರಿದಂತೆ ಆರಾತಿ ಗಜ ಪಂಚಾಸ್ಯ = ಶತ್ರು ಗಜಕ್ಕೆ ಸಿಂಹ?