Monday, October 26, 2009

ಆಸ್ತಿ ಘೋಷಣೆ

ಬೆಳೆಯುವ ಹಾದಿಯಲ್ಲಿ ಅನೇಕ ಕಲಿಕೆಗಳನ್ನು ಕೂಡಿಟ್ಟುಕೊಳ್ಳುತ್ತಾ ಸಾಗುತ್ತೇವೆ; ಕೆಲವು ಆಸ್ತಿ, ಕೆಲವು ನಾಸ್ತಿ. ಚಿಕ್ಕಂದಿನಲ್ಲಿ ಮನೆಯಲ್ಲಿ ಆಗುವ ಬಾಲಪಾಠ (ಮನೆಮಾತಿನಲ್ಲಿ ಬಾಯಿಪಾಠ) ಒಂದು ಬಹು ಮುಖ್ಯವಾದ ಸಂಪಾದನೆ. ಆ "ಬಾಯಿಪಾಠ" ವರ್ಣಮಾಲೆಯಾಗಬಹುದು, ಮಗ್ಗಿಯಾಗಬಹುದು, ದೇವಸ್ತುತಿಯಾಗಬಹುದು, ಹಾಡು-ಹಸೆಯಾಗಬಹುದು ಅಥವ ಗಹನವಾದ (ಅದನ್ನು ಹೇಳಿಕೊಟ್ಟವರಿಗೇ ಅರ್ಥವಾಗಿಲ್ಲದ) ಮಂತ್ರವೂ ಆಗಿರಬಹುದು.

ಮಗುವಿನ ಮುಂದಿನ ಜೀವನದಲ್ಲಿ ಈ ಬಾಲ್ಯಸಂಸ್ಕಾರ ಬಹುಮುಖ್ಯ ಪಾತ್ರವಹಿಸುತ್ತದೆಯೆನ್ನುವುದು ನನ್ನ ನಂಬಿಕೆ. ಅದರ ಪರಿಣಾಮ ನೇರವಲ್ಲದಿರಬಹುದು, ಕಾಣುವಷ್ಟು ಮೂರ್ತವಲ್ಲದಿರಬಹುದು, ಉಪಯುಕ್ತವೂ ಅಲ್ಲದೇ ಇರಬಹುದು. ಕಲಿಯುವಾಗ ಗಮನಿಸಿಲ್ಲದ ಅದಾವುದೋ ಒಂದು ಶ್ರುತಿ, ಪಲುಕು, ಪದ-ವಾಕ್ಯಗಳು ಇದ್ದಕ್ಕಿದ್ದಂತೆ ಇನ್ನಾವಾಗಲೋ ಅರ್ಥ ಸ್ಫುರಿಸುತ್ತವೆ. ನೆಲದ ಮರೆಯ ನಿಧಾನದಂತೆ ಅದೆಲ್ಲೋ ಮರೆಯಾಗಿದ್ದು, ಬದುಕಿನ ಯಾವಯಾವುದೋ ಘಟ್ಟದಲ್ಲಿ ಥಟ್ಟನೇ ಕೈಗೊದಗುವ ಸಂಪದ್ವಿಶೇಷ ಅದು. ಅಥವ ಆ ಸಂಪತ್ತು ಮಗುವಿಗೆ ಕೈಗೂಡದೇ ಅದರ ಮುಂದಿನ ಮತ್ತಾವುದೋ ತಲೆಮಾರಿಗೂ ಕೈಗೂಡೀತು, ಯಾರಿಗೆ ಗೊತ್ತು? ಆದ್ದರಿಂದ ಅದು ತಲೆಮಾರಿನಿಂದ ತಲೆಮಾರಿಗೆ ಅದು ದಾಟಿಕೊಳ್ಳುವುದೇ ಅದರ ಪ್ರಯೋಜನಕ್ಕಿಂತಾ ಮುಖ್ಯ.

ನಾನು ಚಿಕ್ಕಂದಿನಂದಿನಿಂದ ಕೇಳುತ್ತಾ, ’ಒಪ್ಪಿಸು’ತ್ತಾ ಬಂದ ಅನೇಕ "ಬಾಯಿಪಾಠ"ಗಳಲ್ಲಿ ನನಗೆ ಅಮೂಲ್ಯವೆನ್ನಿಸಿದ್ದ ಕೆಲವನ್ನು ಸಂಗ್ರಹಿಸಿ ಜೋಪಾನಮಾಡಿಡುವುದೇ ಈ ಬ್ಲಾಗಿನ ಉದ್ದೇಶ.

2 comments:

Anonymous said...

ಬಾಲ್ಯಪಾಠಗಳ ಬಗೆಗಿನ ನಿಮ್ಮ ವ್ಯಾಖ್ಯಾನ ತುಂಬಾ ಚೆನ್ನಾಗಿದೆ. ಮಗ್ಗಿ ಇತ್ಯಾದಿಗಳನ್ನು ಮೆದುಳಿನ RAM-ನಲ್ಲಿ ಆದಿಯಲ್ಲೇ ತುಂಬಿಸುತ್ತಿದ್ದುದರಿಂದ ಬೇಕೆಂದಾಗ ಬಳಸಿಕೊಳ್ಳುವುದು ಸುಲಭ; ಹೆಚ್ಚಿನ ಲೆಕ್ಕಗಳನ್ನು ಕ್ಯಾಲ್ಕ್ಯುಲೇಟರ್ ಸಹಾಯವಿಲ್ಲದೇ ಮುಗಿಸಬಹುದು.
ಈ ಬ್ಲಾಗಿನಲ್ಲಿ ಇನ್ನೂ ಹೆಚ್ಚಿನ ಆಸಕ್ತಿಕರ ವಿಷಯಗಳನ್ನು ತಿಳಿಸಿಕೊಡುತ್ತೀರೆಂದು ನಿರೀಕ್ಷಿಸುತ್ತಿದ್ದೇನೆ.

ಪ್ರಸನ್ನ

VENKATRAMAN MARATHI said...

good one sir...