Monday, June 14, 2010

ನರಸಿಂಹ ಚರಿತ್ರೆ - ೨

ಕೆಸರೊಳಗಿನ ಮಾಣಿಕ್ಯದಂದದಿ
ಅಸುರಗೇ ಪ್ರಹ್ಲಾದನುದಿಸಿದನು
ಮಿಸುನಿಯಂತೆ ಶಿಶು ಹೊಳೆಯುತ್ತಿರಲು
ಕುಶಲದ ರಕ್ಕಸ ರಾಯ್ಮುದ್ದಿಸಿದ

ಹರಿಡಿಂಗರಿಗನ ದೇಹದ ಕಾಂತಿ
ಹರಿದುವು ದಶದಿಕ್ಕುಗಳಿಗು ಶಾಂತಿ
ದುರುಳ ಹಿರಣ್ಯಕನವ ದುರ್ಮಂತ್ರಿ
ಬರಹವ ಕಲಿಸಬೆಕೆಂದನು ತಂತ್ರಿ
ಕರೆಸಿದ ಕರಣಿಕರನು ದಿಗ್ದಂತಿ
ಬರಸೆಂದನು ಬಾಲನ ಕಡುಭ್ರಾಂತಿ

ಓದೊಮಠಕೆ ನಡೆಯಲು ಪ್ರಹ್ಲಾದ
ಓದೋ ಮಂಟಪದೊಳಗೆ ಬಾಲಕನ
ಕಾದಿಹ ದೈತ್ಯರ ಕೂಡೆ ಮತ್ತವನ
ಮಾಧವನಂಘ್ರಿಯ ಪ್ರೀಯದ ಮಗನ
ಆದಿನರಾಯಣಗೊಲಿದಿದ್ದವನ

ಪರಮಭಕ್ತರಿಗೆ ಪರಿಶೋಭಿಪನ
ಹರಿಪಾದವೆ ಗತಿಯೆಂಬಸೇವಕನ

ಓನಾಮವ ಬರೆಯೆಂದರೆ ಅವನು
ಶ್ರೀನಾರಾಯಣನೆಂದು ಬರೆದನು
ನಾನಾವಿಧದಲಿ ಕಲಿಸಿದರವನಿಗೆ
ಜಾಣಶ್ರಿರಂಗನ ಧ್ಯಾನವ ಬಿಡನು

ಬಿಡೋಯೆನ್ನ ಹಗೆಯನು ನೆನೆಯುವುದ
ಖಡುಗವ ಪಿಡಿದು ತಾ ಕಲಿಯಾದ
ಹಿಡಿದ್ ಗಾಂಡೀವ್ದಲಿ ತರಿದೊಟ್ಟಿಸಿದ
ನಡೆದನು ಪ್ರಹ್ಲಾದನ ಬಳಿಗಾಗ

ಸರಿಯೆ ಎನ್ನ ಸಹಸಕೆ ಮತ್ತವನು

ದೇಶವ ತಿರುಗುವ ದಾಸ ಮತ್ತವನು
ಲೇಸು ಕೊಡುವನೇ ನಿನಗೆ ಮತ್ತವನು

ಅಂದೇ ಪಾತಾಳಕೆ ಬಿದ್ದೋನು
ಬಂದು ಜೀವಿಪೊನಾಗೆನ ಮುಂದವನು

ಕೇಳ್ ರಕ್ಕಸ ನಿನ್ನ ಮಗ ನಾನಲ್ಲ

ಆಡಿಕೊಂಬ ಬರೆ ಶಿಶು ನಾನಲ್ಲ

ತನುವನು ದನುಜಾರಿಗೆ ಮಾರಿದೆನು
ವನಜ್ನಾಭನ ಪಾದವ ನಂಬಿಹೆನು

ಎನ್ನ ಹೃದಯದಲೀ ರಂಗ ಬಂದಿರುವನು
ನಿನ್ನ ನನ್ನ ನುಡಿಗಳ ಕೇಳುತ್ತಿರುವನು

ನಿಲ್ಲು ನಿಲ್ಲು ನೀ ಬದುಕುವನಲ್ಲ
ಬಲ್ಲವನಾದರೆ ಹೊಯ್ಯೆಲೊ ಖುಲ್ಲ

ಎಂದ ಮಾತಿಗೆ ಹಿರಣ್ಯಕನು ಗರ್ಜಿಸಿದ
ಕೊಂದಲ್ಲದೆ ಮಾಣೆನು ಮಗನೆಂದ
ಕಂದನ್ ತೆಗೆದು ಗಗನಕ್ಕಿಟ್ಟ
ಚಂದ್ರಾಯುಧದಲಿ ಮೈಯ ಕಡಿಸಿದ
ಒಂದು ಕೋಟಿ ಹಾವಲಿ ಕಚ್ಚಿಸಿದ

ಹಾಲೊಳು ವಿಷವ ಬಾಲಕಗೆ ಕುಡಿಸಿದ

ಪಟ್ಟದಾನೆಗಳ ತನ್ರೆಂತೆಂದ
ನೆಟ್ಟಗೆ ಮಾವ್ಟಿಗ ಕರಕೊಂಬರಲು
ಮೆಟ್ಟಿ ಸೀಳಿರೋ ಇವನೆಂದೆನಲು
ಪಟ್ಟದಾನೇಗಳು ನೀಲವರ್ಣನಾ
ಮುಟ್ಟಲಂಜೊಮ್ಮೇ ಓಡುತ್ತಿರಲು

ಅರಿದರಿದೇ ಅಂದೇ ಬೆರಗಾದೆ
ಬರಿಚಿಂತೇಲೇಸೂ ಬೆರಗಾದೆ

ಎಲ್ಲಿಹನೋ ನಿನ್ನೊಡೆಯನೆಂದರೆ
ಇಲ್ಲೇ ತೋರುವೆನೆಂದನು ತರಳ
ಕಲ್ಕಂಬದಲೀ ಬಂದು ಕರೆಯಲು

ಇಬ್ಬಗೆಯಾಗೀ ನೆಲೆಸಿತು ಕಂಬ
ಮಬ್ಬಾಯಿತು ಹೊಗೆಯಲಿ ಪ್ರತಿಬಿಂಬ

ಚಿಟಿಲುಚಿಟಿಲು ಭುಗಿಭುಗಿಲೆಂದೇಳುತ
ಕೇಸರಿ ರೂಪಲಿ ತಾ ಹೊರಘೊರಟ
ಸೂಸುವ ಕಿಡಿಗಂಗಳ ಬಲು ತುಂಟ
ದೇಶದಿ ದಾನವರೆದೆಯಾ ಗೂಟ
ಸಾಸಿರ ನಾಮದ ಶ್ರೀಲಕ್ಷ್ಮಿಯರಸ

ಹೊಡೆದು ಕೆಡಹಿ ತೊಡೆ ಮೇಲ್ಮಲಗಿಸಿದ

ಕಮಾನು ಕರುಳನು ಮಾಲೇಲ್ಪೊತ್ತ

ಶ್ರೀದೇವೀ ಸನ್ಮ್ಯಾಳ್ದಲಿ ಮೆರೆದ

ಬಾಲನ ಮೇಲೇ ಕರುಣವನಿತ್ತ

ಆದಿ ನಾರಾಯಣ ಶ್ರೀನಾರಸಿಂಹ ಪರಮ ಭಾಗವತನಾದ ಪ್ರಹ್ಲಾದನಿಗೆ ಪರಮ ಪದವಿಯನಿತ್ತೇ, ಇತಿಶ್ರೀ.

==================

ಮತ್ತಿದೂ ನಮ್ಮ ತಂದೆಯ ಮನೆಯಲ್ಲಿ ಹೇಳುತ್ತಿದ್ದುದು. ಸಾಕಷ್ಟು ತಲೆಮಾರು ದಾಟಿರಬೇಕು, ನೆನಪು ಬಹಳಷ್ಟು ಕಡೆ ಕೈ ಕೊಟ್ಟಿದೆ, ಹೇಳಿಕೊಟ್ಟವರಿಗೂ. ಇದ್ದುದನ್ನು ಸರಿ ಜೋಡಿಸಿ ಇಲ್ಲಿ ಬರೆದಿದ್ದೇನೆ. ಪೂರ್ಣಪಾಠ ತಿಳಿದವರು ತಿಳಿಸಿದರೆ ಉಪಕಾರ. ಇದು ಕನಕ ದಾಸರದೆಂದು ನಮ್ಮ ಚಿಕ್ಕಪ್ಪನವರ ಅಭಿಪ್ರಾಯ, ನನಗೆ ಖಚಿತವಿಲ್ಲ.

Monday, October 26, 2009

ನರಸಿಂಹಚರಿತ್ರೆ - ೧

ಶ್ರೀಲ ಲೋಲ ಮನೋಹಾರ ಶುದ್ಧ ಲಕ್ಷ್ಮಿನಾರಸಿಂಹ
ದೀನ ಪಾಲಕನೆ ತ್ರೈಲೋಕ್ಯ ಪಾಲ ನಾರಸಿಂಹ
ಕಮಲನಯನ ಕಮಲ ಗೋ ಕಮಲಭೃಂಗ ನಾರಸಿಂಹ
ವಿಮಲವಿಭವ ವಿಶ್ವಮೂರ್ತಿ ವಿಶ್ವಮೂರ್ತಿ ನಾರಸಿಂಹ

ಲೀಲೆಯಿಂದ ಆಲದೆಲೆಯ ಮೇಲೆ ಇದ್ದೆ ನಾರಸಿಂಹ
ಪಾಲಿಸಿದೆ ತ್ರಿಜಗವನ್ನು ಪ್ರಳಯದಿಂದ ನಾರಸಿಂಹ
ಮತ್ಸ್ಯಮುಖದಿ ಸೋಮಕನ್ನ ಮರ್ಧಿಸಿದೆ ನಾರಸಿಂಹ
ಅಚ್ಚರಿಪೋ ವೇದಗಳನು ಅಜನಿಗಿತ್ತೆ ನಾರಸಿಂಹ

ಕೂರ್ಮರೂಪಿನಿಂದ ಗಿರಿಯ ಕೂಡಿ ಮೆರೆದೆ ನಾರಸಿಂಹ
ಆ ಮಹಾ ಅಮೃತಗಳನು ಸುರರಿಗಿತ್ತೆ ನಾರಸಿಂಹ
ಉರಿಯ ಮರಣದಾ ಒಳಗೆ ಉದ್ಭವಿಸಿದೆ ನಾರಸಿಂಹ
ಮುರಿಯ ಬಂದ ಮೃತ್ಯುವಿಂಗೆ ಮೃತ್ಯುವಾದೆ ನಾರಸಿಂಹ

ಉಪ್ಪರಿಗೆಯಿಂದಲೀ ಉರುಳಿದನಯ ನಾರಸಿಂಹ
ಅಪ್ಪಿಕೊಂಡು ಕಾಯೊ ಎನ್ನ ಅಪ್ಪ ನೀನು ನಾರಸಿಂಹ
ಜಟ್ಟಿಗಳ ಜಗಕ್ಕೆ ಜಗಜ್ಜಟ್ಟಿ ನೀನು ನಾರಸಿಂಹ
ಗಟ್ಟಿ ವಜ್ರಸೂತ್ರಗಳಿಗೆ ಕವಚನೀನು ನಾರಸಿಂಹ

ಯಂತ್ರಮಂತ್ರಾಗಳಿಗೆ ಮಂತ್ರ ನೀನು ನಾರಸಿಂಹ
ಯಂತ್ರ ಕಾವು ರಕ್ಷೆಗಳಿಗೆ ತಂತ್ರ ನೀನು ನಾರಸಿಂಹ
ದಾಸಾನುಗ್ರಹವನ್ನು ಧಾರಣಿಪೋ ನಾರಸಿಂಹ
ಶಂಖಚಕ್ರ ಅಭಯಹಸ್ತ ಅಂಕಿತವೇ ನಾರಸಿಂಹ

ಸ್ವಾಮೀ ನಿಮ್ಮ ಚಿತ್ತ, ಗಂಗೆ ಗೋದಾವರಿ ಕೃಷ್ಣವೇಣಿ ಭೀಮರತಿ, ನರಸಿಂಗನ ಚರಿತ್ರೆಯನ್ನು ಹಿಂಗದೆ ಹೇಳಿ-ಕೇಳಿದವರಿಗೆ ಅಷ್ಟೈಶ್ವರ್ಯವನ್ನೂ ಪುತ್ರ ಸಂತಾನವನ್ನೂ ಸಾಯುಜ್ಯದ ಮುಕ್ತಿಯನ್ನೂ ಕೊಟ್ಟು ರಕ್ಷಿಸುವನು ಸಿರಿಹಯವದನ ಶ್ರೀಲಕ್ಷ್ಮೀ ನಾರಸಿಂಹನು...

ಇತಿಶ್ರೀ ನರಸಿಂಹ ಸ್ತೋತ್ರ ಸಂಪೂರ್ಣಂ

ಶ್ರೀಕೃಷ್ಣಾರ್ಪಣಮಸ್ತು.

ಇದು ನಮ್ಮ ತಂದೆಯ ಮನೆಯಲ್ಲಿ ಹೇಳುತ್ತಿದ್ದುದು. ನೆನಪು ಕೈಕೊಟ್ಟ ಕಡೆಯೆಲ್ಲಾ ಎಂದಿನಂತೆಯೇ ಸಾಲುಗಳನ್ನು ಎತ್ತಿಕೊಟ್ಟ ಚಿಕ್ಕಪ್ಪನವರಿಗೆ ಧನ್ಯವಾದಗಳು

ಆಸ್ತಿ ಘೋಷಣೆ

ಬೆಳೆಯುವ ಹಾದಿಯಲ್ಲಿ ಅನೇಕ ಕಲಿಕೆಗಳನ್ನು ಕೂಡಿಟ್ಟುಕೊಳ್ಳುತ್ತಾ ಸಾಗುತ್ತೇವೆ; ಕೆಲವು ಆಸ್ತಿ, ಕೆಲವು ನಾಸ್ತಿ. ಚಿಕ್ಕಂದಿನಲ್ಲಿ ಮನೆಯಲ್ಲಿ ಆಗುವ ಬಾಲಪಾಠ (ಮನೆಮಾತಿನಲ್ಲಿ ಬಾಯಿಪಾಠ) ಒಂದು ಬಹು ಮುಖ್ಯವಾದ ಸಂಪಾದನೆ. ಆ "ಬಾಯಿಪಾಠ" ವರ್ಣಮಾಲೆಯಾಗಬಹುದು, ಮಗ್ಗಿಯಾಗಬಹುದು, ದೇವಸ್ತುತಿಯಾಗಬಹುದು, ಹಾಡು-ಹಸೆಯಾಗಬಹುದು ಅಥವ ಗಹನವಾದ (ಅದನ್ನು ಹೇಳಿಕೊಟ್ಟವರಿಗೇ ಅರ್ಥವಾಗಿಲ್ಲದ) ಮಂತ್ರವೂ ಆಗಿರಬಹುದು.

ಮಗುವಿನ ಮುಂದಿನ ಜೀವನದಲ್ಲಿ ಈ ಬಾಲ್ಯಸಂಸ್ಕಾರ ಬಹುಮುಖ್ಯ ಪಾತ್ರವಹಿಸುತ್ತದೆಯೆನ್ನುವುದು ನನ್ನ ನಂಬಿಕೆ. ಅದರ ಪರಿಣಾಮ ನೇರವಲ್ಲದಿರಬಹುದು, ಕಾಣುವಷ್ಟು ಮೂರ್ತವಲ್ಲದಿರಬಹುದು, ಉಪಯುಕ್ತವೂ ಅಲ್ಲದೇ ಇರಬಹುದು. ಕಲಿಯುವಾಗ ಗಮನಿಸಿಲ್ಲದ ಅದಾವುದೋ ಒಂದು ಶ್ರುತಿ, ಪಲುಕು, ಪದ-ವಾಕ್ಯಗಳು ಇದ್ದಕ್ಕಿದ್ದಂತೆ ಇನ್ನಾವಾಗಲೋ ಅರ್ಥ ಸ್ಫುರಿಸುತ್ತವೆ. ನೆಲದ ಮರೆಯ ನಿಧಾನದಂತೆ ಅದೆಲ್ಲೋ ಮರೆಯಾಗಿದ್ದು, ಬದುಕಿನ ಯಾವಯಾವುದೋ ಘಟ್ಟದಲ್ಲಿ ಥಟ್ಟನೇ ಕೈಗೊದಗುವ ಸಂಪದ್ವಿಶೇಷ ಅದು. ಅಥವ ಆ ಸಂಪತ್ತು ಮಗುವಿಗೆ ಕೈಗೂಡದೇ ಅದರ ಮುಂದಿನ ಮತ್ತಾವುದೋ ತಲೆಮಾರಿಗೂ ಕೈಗೂಡೀತು, ಯಾರಿಗೆ ಗೊತ್ತು? ಆದ್ದರಿಂದ ಅದು ತಲೆಮಾರಿನಿಂದ ತಲೆಮಾರಿಗೆ ಅದು ದಾಟಿಕೊಳ್ಳುವುದೇ ಅದರ ಪ್ರಯೋಜನಕ್ಕಿಂತಾ ಮುಖ್ಯ.

ನಾನು ಚಿಕ್ಕಂದಿನಂದಿನಿಂದ ಕೇಳುತ್ತಾ, ’ಒಪ್ಪಿಸು’ತ್ತಾ ಬಂದ ಅನೇಕ "ಬಾಯಿಪಾಠ"ಗಳಲ್ಲಿ ನನಗೆ ಅಮೂಲ್ಯವೆನ್ನಿಸಿದ್ದ ಕೆಲವನ್ನು ಸಂಗ್ರಹಿಸಿ ಜೋಪಾನಮಾಡಿಡುವುದೇ ಈ ಬ್ಲಾಗಿನ ಉದ್ದೇಶ.